stat counter




Saturday, 1 November 2014

ಮೊದಲ ಮಾತು

ಆತ್ಮೀಯರೆ
ಪಶುಪಾಲನೆ ಎಂಬುದು ಅನಾದಿಕಾಲದಿಂದಲೂ ಕೃಷಿಯ ಅವಿಭಾಜ್ಯ ಅಂಗ, ಮಾನವನು ಒಂದೆಡೆ ನೆಲೆನಿಂತು ಆಹಾರ ಉತ್ಪಾದನೆಗಾಗಿ ಕೃಷಿಯತ್ತ ಹೆಜ್ಜೆಯಿಟ್ಟಲ್ಲಿಂದಲೂ ಹಲವಾರು ಪಶುಪಕ್ಷಿಗಳು ಅವನಜೊತೆಯಲ್ಲಿ ಸಾಗಿ ಬಂದಿವೆ.  ಅವುಗಳನ್ನು ಪಾಲನೆ ಮಾಡುತ್ತ ಹಾಲು ಹೈನು, ಉಣ್ಣೆ, ಮಾಂಸ ಮೊಟ್ಟೆ ಚರ್ಮ ಗೊಬ್ಬರ ಮುಂತಾದ ಹತ್ತುಹಲವು ಉಪಯೋಗಗಳನ್ನು ಮನುಷ್ಯನು ಪಡೆದುಕೊಂಡು ಬಂದಿರುತ್ತಾನೆ. ಕೃಷಿಯಿಂದ ಇಂದು ಜಗತ್ತಿಗೆ ಅನ್ನ ಒದಗುತ್ತಿದೆ ಎಂಬುದರಲ್ಲಿ  ಮಾನವನಷ್ಟೇ ಕೊಡುಗೆಯನ್ನು ಅವನು ಸಾಕಿದ ಪ್ರಾಣಿಗಳು ನೀಡಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಅಂತಹ ಪ್ರಾಣಿಗಳಲ್ಲಿ  ಹಸು ಕುರಿ ಆಡು ಮುಖ್ಯವಾದವುಗಳು. ಹಸು, ಹಾಲು ಹೈನು ನೀಡಿದರೆ ಎತ್ತುಗಳು ಹೊಲ ಗದ್ದೆಗಳಲ್ಲಿ ದುಡಿಯಲು ಹಾಗೂ ಸಾಗಾಣಿಕೆಗೆ ಬಳಕೆಯಾದವು. ಉಳಿದಂತೆ ಕುರಿ ಹಾಗೂ ಆಡುಗಳನ್ನು ಮುಖ್ಯವಾಗಿ ಮಾಂಸ, ಚರ್ಮ,ಉಣ್ಣೆಗಾಗಿ  ಸಾಕಲಾಗುತ್ತಿವೆ. ಇತ್ತೀಚಿನ ದಿನಗಳಲ್ಲಂತೂ ಕೃಷಿಕರಿಗೆ ಅದರಲ್ಲೂ ಮದ್ಯಮ ವರ್ಗದ ರೈತರಿಗೆ ಆಡು ಕುರಿಗಳಂತೂ ನಡೆದಾಡುವ ಎಟಿಎಂಗಳಂತಿದ್ದು ಆರ್ಥಿಕ ಸಂಕಷ್ಟದಲ್ಲಿ ರೈತನಿಗೆ ಹಣವೊದಗಿಸುವ ಆಪದ್ಬಾಂಧವರೆನಿಸಿಕೊಂಡಿವೆ.
ಇಂತಹ ಆಡು ಕುರಿಗಳ ಪೈಕಿ ಪ್ರದೇಶಗಳಿಗೆ ಅನುಗುಣವಾಗಿ ಹಲವಾರು ತಳಿ ವೈವಿದ್ಯಗಳು ಕಂಡು ಬರುತ್ತವೆ. ಇಂತಹವುಗಳಲ್ಲಿ  ಒಂದು ವಿಶಿಷ್ಟವೂ ಅನನ್ಯವೂ ಆದ, ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮದ ಹೆಸರಿನಿಂದ ಗುರುತಿಸಲ್ಪಡುವ  ವೈಶಿಷ್ಟ್ಯಪೂರ್ಣ ಕುರಿ ತಳಿ '"ಬಂಡೂರು ಕುರಿ"  (Bandur Sheep).
ಈ ತಳಿಯು ಬಹು ಪ್ರಖ್ಯಾತವಾದ ತಳಿಯಾಗಿದ್ದು ನಮ್ಮ ಕರ್ನಾಟಕದ ಹೆಮ್ಮೆಯೆನ್ನುವಷ್ಟು ಉತ್ಕೃಷ್ಟವಾದ ತಳಿವೈವಿದ್ಯವಾಗಿದೆ.   ತಳಿಯು ಇಂದು ಅಳಿವಿನ ಅಂಚಿನಲ್ಲಿದೆ. ಅತ್ಯದ್ಬುತವೂ ಅನನ್ಯವೂ ಆದ ಸುವಾಸನೆ ಹಾಗೂ ಸ್ವಾದಭರಿತವಾದ ಮಾಂಸದ ಕಾರಣದಿಂದಾಗಿ ವಿಶ್ವಪ್ರಸಿದ್ಧವಾದ ತಳಿಯಾಗಿದ್ದು ಅಳಿವಿನಂಚಿನಲ್ಲಿರುವ ತಳಿಯನ್ನು ಉಳಿಸಿಕೊಳ್ಳಲು ಶ್ರಮಪಡಬೇಕಾದ ಸ್ಥಿತಿ ಇಂದು ನಿರ್ಮಾಣವಾಗಿರುವುದು ನಮ್ಮ ದೌರ್ಭಾಗ್ಯ. 
ಹೆಚ್ಚುತ್ತಿರುವ ನಗರೀಕರಣ, ಅರಣ್ಯ ನಾಶ,  ಅತಂತ್ರ ಆರ್ಥಿಕ ವ್ಯವಸ್ಥೆ, ಕೃಷಿಯಿಂದ ವಿಮುಖರಾಗುತ್ತಿರುವ ರೈತರು, ಕೃಷಿಯತ್ತ ನಿರಾಸಕ್ತಿ ಬೆಳಸಿಕೊಳ್ಳುತ್ತಿರುವ ಯುವಜನತೆ, ಪರಿಸರ ಅಸಮತೋಲನ ಇವೆಲ್ಲ ಕಾರಣಗಳಿಂದಾಗಿ ಬಹಳಷ್ಟು ವಿಶೇಷವೂ ಅನನ್ಯವೂ ಆದ  ಜೀವ ಸಂಕುಲಗಳನ್ನು ಪಕ್ಷಿಸಂಕುಲಗಳನ್ನು ಹಾಗೂ ಔಷದೀಸಸ್ಯಗಳನ್ನೂ ಆಹಾರ ಬೆಳೆಗಳ ತಳಿಗಳನ್ನು ಪಶುಸಂಪತ್ತನ್ನು ನಾವುಗಳು ಕಳೆದುಕೊಳ್ಳುತ್ತಿದ್ದೇವೆ. 
ಇಷ್ಟೆಲ್ಲಾ ಕಣ್ಣಮುಂದೆ ನಡೆಯುತ್ತಿದ್ದರೂ ಪ್ರತಿಕ್ರಿಯಿಸದ ಜಡತ್ವವು ಇಂದು  ಆವರಿಸಿಕೊಂಡಂತಿದೆ. ಆದಾಗ್ಯೂ ಕೂಡ ಅಲ್ಲೊಂದು ಇಲ್ಲೊಂದು ಎನ್ನುವಂತೆ ವಿನಾಶದತ್ತ ಸಾಗುವ ಜೀವ ಸಂಕುಲಗಳನ್ನು ಸಂರಕ್ಷಿಸುವ ಪ್ರಯತ್ನಗಳು ಸಾಗುತ್ತಿವೆ. ಆರಂಭದಲ್ಲಿ ಇವುಗಳು ಒಂಟಿಧ್ವನಿಗಳೆನಿಸಿಕೊಂಡರೂ ಕ್ರಮೇಣ ಬರುಬರುತ್ತಾ ಹತ್ತು ಹಲವು ಕಂಠಗಳು ಜೊತೆಗೂಡಿ ಒಂದು ಗಂಭೀರವಾದ ಸಿಂಹ ಘರ್ಜನೆಯಂತಾಗಿ ಇದರ ಪ್ರಭಾವದಿಂದಾಗಿ ಬಹಳಷ್ಟು ಯಶಸ್ಸು ಗಳಿಸುವುದು ಸಾಧ್ಯವಾಗುತ್ತದೆ. 
ಇಂತಹ ಒಂದು ವಿಶೇಷ ಪ್ರಯತ್ನ ಬಂಡೂರು ಕುರಿ ತಳಿಯ ಸಂರಕ್ಷಣೆ ಹಾಗೂ ಸಂವರ್ಧನೆಯ ಬಗ್ಗೆ ಸದ್ದಿಲ್ಲದೆ ರೂಪುಗೊಂಡಿದೆ. ಈ ವಿಶೇಷ ಪ್ರಯತ್ನದ ರೂವಾರಿ  ಮೈಸೂರು ಜಿಲ್ಲೆ ಬನ್ನೂರು ಸಮೀಪದ ರಂಗಸಮುದ್ರ ಗ್ರಾಮದ ವಾಸಿಯಾದ ಶ್ರೀ ರಮೇಶ್ ರವರು. ಇವರು ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದು, ಹಲವಾರು ವರ್ಷ ಕಾಲೇಜು ಪ್ರಾಂಶುಪಾಲರಾಗಿ ಸೇವೆಸಲ್ಲಿಸಿ  ತನ್ನತ್ತ ಕೈಬೀಸಿ ಕರೆದ ಕೃಷಿಯ ಕರೆಗೆ ಒಗೊಟ್ಟು ಈಗ ಪೂರ್ಣ ಪ್ರಮಾಣದ ಕೃಷಿಕರಾಗಿ , ಪ್ರಗತಿಪರ ರೈತರಾಗಿ ಗುರುತಿಸಿಕೊಂಡವರು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮದ ಹೆಸರಿಂದ ಕರೆಯಲ್ಪಡುವ ವಿಶಿಷ್ಟ ಕುರಿತಳಿಯಾದ ಬಂಡೂರು ಕುರಿ ತಳಿಯು ಅಳಿವಿನಂಚಿನಲ್ಲಿರುವುದನ್ನು ಮನಗಂಡು ಇದರ  ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ತಮ್ಮ ಗ್ರಾಮದಲ್ಲಿಯೇ ನಿಸರ್ಗ ಬಂಡೂರು ಕುರಿ ತಳಿ ಸಂವರ್ಧನಾ ಕೇಂದ್ರ ವನ್ನು ಸ್ಥಾಪಿಸಿ, ತಮ್ಮ ಗೆಳೆಯರ ಸಹಕಾರದೊಂದಿಗೆ ಶ್ರಮವಹಿಸುತ್ತಿದ್ದಾರೆ. 
ಶ್ರೀ ರಮೇಶ್ ರಂಗಸಮುದ್ರ ಇವರ ಈ  ಪ್ರಯತ್ನದ ಫಲಾವಾಗಿ ಬಂಡೂರು ಕುರಿ ತಳಿಯನ್ನು ಸಂರಕ್ಷಿಸುವ ಬಗ್ಗೆ ರೈತರಲ್ಲಿ, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನಗಳು ಸಾಗಿವೆ. ಹಲವಾರು ದಿನಪತ್ರಿಕೆಗಳು ದೃಶ್ಯ ಮಾಧ್ಯಮಗಳು ಕೂಡ ಈ ಬಗ್ಗೆ ವರದಿ ಪ್ರಸಾರ ಮಾಡಿವೆ ಹಾಗೂ ಮೈಸೂರು ಆಕಾಶವಾಣಿ ಕೇಂದ್ರವು ಈ ವಿಶೇಷ ಪ್ರಯತ್ನಕ್ಕೆ ಪೂರಕವಾಗಿ ಕೃಷಿರಂಗ ಕಾರ್ಯಕ್ರಮದಡಿಯಲ್ಲಿ ಬಂಡೂರು ಭಾಗ್ಯ (Banduru Bhagya) ಎಂಬ ಸರಣಿ ಕಾರ್ಯಕ್ರಮ ಹಮ್ಮಿಕೊಂಡು ಕೃಷಿಯ ಬಗ್ಗೆ ತನಗಿರುವ ಕಾಳಜಿ ಹಾಗೂ ಜವಾಬ್ದಾರಿಯನ್ನು ಮೆರೆದಿದೆ. 
ಇಂದು ಇಂತಹ ವೀಶೇಷ ತಳಿ ಅಳಿವಿನಂಚಿನಲ್ಲಿದ್ದು ಮುಂದೊಂದು ದಿನ ಈ ತಳಿಯು ನಮ್ಮ ಕಣ್ಣಮುಂದಿಂದ ಮರೆಯಾಗುವ ಆತಂಕಕಾರಿ  ಸನ್ನಿವೇಶ ಉಂಟಾಗಿದ್ದು,  ಇದರ ಸಂರಕ್ಷಣೆಗೆ ಪ್ರಯತ್ನಗಳು ಸಾಗಿರುವಾಗ ಇಂತಹ ಪ್ರಯತ್ನಗಳನ್ನು ಬೆಂಬಲಿಸುವ ಹಾಗೂ ಇದಕ್ಕೆ ಸಹಕರಿಸುವ ಗುರುತರವಾದ ಜವಾಬ್ದಾರಿ ಎಲ್ಲರದ್ದಾಗಿದೆ. ಈ ನಿಟ್ಟಿನಲ್ಲಿ ತಮ್ಮೆಲ್ಲರಿಗೆ ಇಂತಹ ವಿಶೇಷ ಪ್ರಯತ್ನದ ಬಗ್ಗೆ ಮಾಹಿತಿ ನೀಡುವ, ಅರಿವು ಮೂಡಿಸುವ ಒಂದು ಸಣ್ಣ ಪ್ರಯತ್ನ ಇದಾಗಿದೆ. ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಶುಭಾಕಾಂಕ್ಷೆ ನಮ್ಮೊಂದಿಗಿರಲೆಂದು ಆಶಿಸುತ್ತಾ.....ತಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ.
-ಜ್ಞಾನೇಶ್ ಹೆಬ್ಬಾಡಿ

 9141266660

    ಶ್ರೀ ರಮೇಶ್. ಪಿ       ನಿಸರ್ಗ ಬಂಡೂರು ಕುರಿ ತಳಿ ಸಂವರ್ಧನಾ ಕೇಂದ್ರ,   ರಂಗಸಮುದ್ರ. ಕಸಬಾ ಹೋಬಳಿ,       ತಿ.ನರಸೀಪುರ ತಾಲ್ಲೂಕು,    ಮೈಸೂರು ಜಿಲ್ಲೆ

                                              ದೂರವಾಣಿ ಸಂಖ್ಯೆ:9964405229